Sunday, May 25, 2008

ಹಲ್ಮಿಡಿ ಶಾಸನ



ಕನ್ನಡದ ಅತ್ಯಂತ ಹಳೆಯ ಬರವಣಿಗೆ ಅಂದ್ರೆ ಶಾಸನ ರೂಪದಲ್ಲಿರೋ ಹಲ್ಮಿಡಿ ಶಾಸನ. ಇದು ಕನ್ನಡದ ಹಿರಿಮೆಯನ್ನು ದಾಖಲಿಸಿರೋ ಮೊಟ್ಟಮೊದಲ ಶಾಸನ. ಇದು ಸಿಕ್ಕಿದ ಜಾಗದ ಹೆಸರು ಹಲ್ಮಿಡಿ. ಹಾಗಾಗಿ ಇದನ್ನು ಹಲ್ಮಿಡಿ ಶಾಸನ ಅಂತಾನೆ ಕರೀತಾರೆ. ಈ ಶಾಸನವು ಕದಂಬರ ಕಾಲಕ್ಕೆ ಸೇರಿದ್ದು ಸುಮಾರು ಕ್ರಿ.ಶ.೪೫೦ರ ಕಾಲದ್ದೆಂದು ಹೇಳಲಾಗಿದೆ. ಹದಿನಾರು ಸಾಲುಗಳ ಈ ಶಾಸನದಲ್ಲಿ ಪಲ್ಲವರ ವಿರುದ್ಧ ಯುದ್ಧಗಳನ್ನು ಗೆಲ್ಲಿಸಿಕೊಟ್ಟ ವಿಜಾ ಅರಸನೆಂಬ ಒಬ್ಬ ಯೋಧನಿಗೆ ನೀಡಲಾದ ಭೂಮಿ ಕಾಣಿಕೆಗಳ ಬಗ್ಗೆ ವಿವರ ಇದೆ.

ಹಲ್ಮಿಡಿ ಶಾಸನದಲ್ಲಿರೋದೇನು?


ಹಿಂದೆ ಕದಂಬ ದೊರೆ ಕಾಕುಸ್ಥ ವರ್ಮನ ಅಧಿಕಾರಿಗಳಾಗಿ ಬಲು ಶೂರರಾದ ನಾಗ ಮತ್ತು ಮೃಗೇಶ ಅನ್ನೋರಿದ್ರು. ಜೊತೆಗೆ ಪಶುಪತಿ ಅನ್ನೋ ಮತ್ತೊಬ್ಬನೂ ಇದ್ದ. ಬಾಣರು ಮತ್ತು ಸೇಂದ್ರಕರ ಸೈನ್ಯಗಳನ್ನು ಕೂಡಿಸಿಕೊಂಡು ಇವರು ನೂರಾರು ಯುದ್ಧಗಳನ್ನು ಕೇಕಯ ಪಲ್ಲವರೆದುರು ಮಾಡಿದ್ದರು. ಈ ಸೈನ್ಯದಲ್ಲಿದ್ದು ತನ್ನ ಪರಾಕ್ರಮದಿಂದ ಅನೇಕ ಯುದ್ಧಗಳನ್ನು ವಿಜಾ ಅರಸ ಎನ್ನುವ ಯೋಧನೊಬ್ಬ ಗೆಲ್ಲಿಸಿಕೊಟ್ಟಿದ್ದ. ಯುದ್ಧಗಳೆಲ್ಲಾ ಮುಗಿದ ಮೇಲೆ ರಕ್ತಸಿಕ್ತವಾದ ಖಡ್ಗವನ್ನು ತೊಳೆದು ಯೋಧರನ್ನು ಗೌರವಿಸೋದು ಆಗಿನ ಕಾಲದ ಒಂದು ಸಂಪ್ರದಾಯ. ಅದರಂತೆ ಬಾಣ ಮತ್ತು ಸೇಂದ್ರಕ ಸೈನ್ಯದ ಎದುರು ವಿಜಾ ಅರಸನನ್ನು ಗೌರವಿಸಿ ಸನ್ಮಾನ ಮಾಡಿ ಹಲ್ಮಿಡಿ ಮತ್ತು ಮುಗುಳವಳ್ಳಿ ಎಂಬ ಹಳ್ಳಿಗಳನ್ನು ದಾನ ಮಾಡಲಾಯಿತು. ಈ ದಾನ ಪತ್ರವೇ ಹಲ್ಮಿಡಿ ಶಾಸನವಾಗಿದೆ.

ಮೂಲ ಶಾಸನವನ್ನು ಬೆಂಗಳೂರಿನಲ್ಲಿರುವ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಹಲ್ಮಿಡಿಯಲ್ಲಿ ಸ್ಮಾರಕ ನಿಲ್ಲಿಸಲಾಗಿದೆ.