Wednesday, March 25, 2009

ನಮ್ಮ ಸಂಕಟಗಳಿಗೆ ಮಾರ್ಕೆಟ್‌ ಇಲ್ಲ .. ಪ್ರಚಾರ ನಿಲ್ಲಿಸಿ!

ಸಂತೋಷ ಮತ್ತು ಸಂಕಟ.. ಇವರೆಡೂ ನಮ್ಮ ಬದುಕಲ್ಲಿ ಜೊತೆ ಜೊತೆಗೇ ಇರುತ್ತವೆ. ಒಂದೇ ನಾಣ್ಯದ ಎರಡು ಮುಖಗಳ ಹಾಗೆ! ಕೆಲವೊಮ್ಮೆ ಸಂಭ್ರಮದ ಗಳಿಗೆಗಳು ದಿನಕ್ಕೊಂದರಂತೆ ಜತೆಯಾಗುತ್ತಲೇ ಹೋಗುತ್ತವೆ, ಗೆಳತಿಯ ಪತ್ರಗಳ ಹಾಗೆ.
ಖುಷಿಯ ಕ್ಷಣಗಳು ಒಂದರ ಹಿಂದೊಂದರಂತೆ ನಮ್ಮ ಕೈ ಹಿಡಿದಾಗ ಹಿರಿಹಿರಿ ಹಿಗ್ಗುವ ನಾವು, ಸ್ವಲ್ಪ ದುಃಖ ಅಥವಾ ಸಂಕಟವಾದರೂ ಮುದುಡಿ ಹೋಗುತ್ತೇವೆ. ಆ ಕ್ಷಣಕ್ಕೆ ಅದನ್ನು ಯಾರಲ್ಲಾದರೂ ಹಂಚಿಕೊಂಡರೆ ಮನಸ್ಸು ಕೊಂಚ ಹಗುರಾಗುತ್ತದೆ.

ಕೇಳುವವರು ಆತ್ಮೀಯರಾಗಿದ್ದರೆ, ನಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲವರಾದರೆ ಅದಕ್ಕೆ ಸರಿಯಾದ ಸಮಜಾಯಿಷಿ ನೀಡಿ ದಾರಿ ತೋರುತ್ತಾರೆ. ಬದಲಿಗೆ ಅದನ್ನು ಹತ್ತಾರು ಮಂದಿಯಾಂದಿಗೆ ಹಂಚಿಕೊಂಡರೆ ಕಷ್ಟ. ನಮ್ಮ ಸಂಕಟದ ಕತೆ ಕೇಳಿ ಎದುರಿನಲ್ಲಿ ‘ಪಾಪ ಕಣ್ರೀ, ಛೆ,ಛೆ, ನಿಮಗೆ ಹೀಗೆ ಆಗಬಾರದಿತ್ತು.. ’ ಎಂದು ರಾಗ ಎಳೆಯುವ ಮಂದಿಯೇ ಹಿಂದಿನಿಂದ ನಮ್ಮನ್ನು ಆಡಿಕೊಳ್ಳುವುದುಂಟು.

ತುಂಬ ಸಂದರ್ಭದಲ್ಲಿ ಸಂಕಟದ ಸಂಗತಿ ನಮ್ಮ ವೈಯಕ್ತಿಕ ಬದುಕಿಗೆ ಸಂಬಂಧಿಸಿರುತ್ತದೆ. ಅದನ್ನು ಹತ್ತು ಮಂದಿಯ ಮುಂದೆ ಹೇಳಿಕೊಂಡರೆ, ಅದಕ್ಕಿಂತ ನಾಚಿಕೆಗೇಡಿನ ವಿಷಯ ಮತ್ತೊಂದಿರೋದಿಲ್ಲ. ಹಾಗಿದ್ದೂ ನಾವು ಒಂದಿಬ್ಬರೊಂದಿಗೆ ಎಲ್ಲವನ್ನೂ ಹೇಳಿಕೊಂಡಿರುತ್ತೇವೆ. ಮಾತಿಗೆ ಮೊದಲೇ -‘ಇದು ಗುಟ್ಟಿನ ವಿಚಾರ. ನಿಮ್ಮಲ್ಲೇ ಇರಲಿ’ ಎಂದು ಷರತ್ತು ಹಾಕಿಯೇ ವಿಷಯ ಆರಂಭಿಸಿರುತ್ತೇವೆ. ಭಾಷೆ ಪಡೆದಿರುತ್ತೇವೆ.

ಎದುರಿಗಿದ್ದಾತ ಕೂಡ ಧಾರಾಳವಾಗಿ ಪ್ರಾಮಿಸ್‌ ಮಾಡಿರುತ್ತಾನೆ. ‘ಛೆ, ಛೆ ಎಲ್ಲಾದ್ರೂ ಉಂಟಾ? ಇಂಥ ವಿಷಯ ನನ್ನೊಳಗೆ ಸಾವಿರ ಇವೆ. ಯಾರಿಗಾದ್ರೂ ಹೇಳಿದೀನಾ?’ ಎಂದು ಪ್ರಶ್ನೆ ಕೇಳಿರುತ್ತಾನೆ. ಹಿಂದೆಯೇ ಇನ್ಯಾರದೋ ಬದುಕಿನ ಒಂದು ಸೂಕ್ಷ್ಮ ವಿಚಾರವನ್ನು ನಮ್ಮ ಕಿವಿಗೆ ಹಾಕಿಯೂ ಬಿಡುತ್ತಾನೆ.

ಯಾಕೆ ಹಾಗಾಗುತ್ತದೋ ಕಾಣೆ. ನಮ್ಮ ಸಂಕಟದ ಮಧ್ಯೆಯೂ, ಬೇರೊಬ್ಬರ ಬದುಕಿನ ಗುಟ್ಟು ತಿಳಿದಾಗ ವಿಚಿತ್ರ ಖುಷಿಯಾಗುತ್ತದೆ. ನಾವು ಹಗುರಾದ ಮನದೊಂದಿಗೆ ಮನೆಯತ್ತ ನಡೆದು ಬಂದರೆ -ಆ ಕಡೆ, ನಮಗೆ ಭಾಷೆ ಕೊಟ್ಟಿದ್ದ ಗೆಳೆಯನಿಂದಲೇ ನಮ್ಮ ಗುಟ್ಟಿನ ವಿಚಾರ ಇನ್ನಾರದೋ ಕಿವಿಗೆ ಬಿದ್ದಿರುತ್ತದೆ!

ನಮ್ಮ ಸುತ್ತಮುತ್ತ ಇರುವ ಎಷ್ಟೋ ಮಂದಿ ಹೇಳುತ್ತಲೇ ಇರುತ್ತಾರೆ. ‘ಅವರ ಮನೆಯ ಸೀಕ್ರೆಟ್‌ಗಳೆಲ್ಲಾ ನನಗೆ ಗೊತ್ತು. ಹಾಗೆಯೇ ನಮ್ಮ ಮನೆಯ ಗುಟ್ಟಿನ ವಿಚಾರಗಳು ಅವರಿಗೂ ಗೊತ್ತು.’ ನೆನಪಿರಲಿ, ಹೀಗೆ ಹೇಳುತ್ತಲೇ ಇನ್ನೊಬ್ಬರ ಮನೆಯ ಗುಟ್ಟಿನ ಸಂಗತಿ ತಿಳಿದುಕೊಂಡ ಜನ ಅದನ್ನು ದೇವರಾಣೆಗೂ ಎರಡನೇ ವ್ಯಕ್ತಿಗೆ ದಾಟಿಸಿಯೇ ತೀರುತ್ತಾರೆ. ನಂತರ ಈ ಎರಡನೇ ವ್ಯಕ್ತಿಯಿಂದ ಅದು ಇನ್ನೂ ಐದಾರು ಮಂದಿಯನ್ನು ತಲುಪುತ್ತದೆ. ನಾಲ್ಕು ದಿನ ಕಳೆಯುವುದರೊಳಗೆ ನಿಮ್ಮ ಮನೆಯ ಗುಟ್ಟಿನ ವಿಚಾರ. ನಾನೂರು ಮಂದಿಗೆ ಗೊತ್ತಾಗಿ ಹೋಗಿರುತ್ತದೆ! ಎಲ್ಲರ ದೃಷ್ಟಿಯಲ್ಲೂ ನೀವು ಅಯ್ಯೋ ಪಾಪ.. !

ಈ ಮಾತಿಗೆ ಒಂದು ಪುಟ್ಟ ಉದಾಹರಣೆ ಕೇಳಿ : ಮನೇಲಿ ಹೆಂಡತಿಯಾಂದಿಗೆ ಚಿಕ್ಕ ಜಗಳ ಆಗಿರುತ್ತೆ. ಆಕೆ ಒಡವೆಗೋ, ರೇಷ್ಮೆ ಸೀರೆಗೋ, ಒಂದಿಷ್ಟು ಹಣಕ್ಕೋ ಡಿಮ್ಯಾಂಡ್‌ ಮಾಡಿರುತ್ತಾಳೆ. ಒಂದೆರಡು ದಿನ ಮಾತು ಬಿಟ್ಟಿರುತ್ತಾಳೆ. ಇದನ್ನೇ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಗುಂಡು ಹಾಕಲು ಕೂತ ಮಧುರ(?)ಸಂದರ್ಭದಲ್ಲಿ ನೀವು ಪ್ರಾಂಜಲ ಮನದಿಂದ ಗೆಳೆಯನೊಂದಿಗೆ ಹೇಳಿಕೊಳ್ಳುತ್ತೀರಿ.

ಆತ ಆ ಕ್ಷಣಕ್ಕೆ, ತನಗೆ ತೋಚಿದ ಪರಿಹಾರ ಹೇಳುತ್ತಾನೆ ನಿಜ. ಆದರೆ, ನಿಮ್ಮನ್ನು ಬೀಳ್ಗೊಟ್ಟು ನಾಲ್ಕು ಹೆಜ್ಜೆ ನಡೆದವನು ನೀವು ಹೇಳಿದ ಸಂಗತಿಗೇ ಒಂದಿಷ್ಟು ಉಪ್ಪು, ಖಾರ ಸೇರಿಸಿ ಮತ್ತೊಬ್ಬರ ಕಿವಿಗೆ ಹಾಕಿಬಿಟ್ಟಿರುತ್ತಾನೆ. ‘ಹೆಂಡತಿಯಾಂದಿಗೆ ಜಗಳವಾಡಿದ್ದರಿಂದ ನನಗೆ ಬಹಳ ಬೇಸರವಾಯಿತು’ ಎಂದು ಮಾತ್ರ ನೀವು ಹೇಳಿರುತ್ತೀರಿ ನಿಜ. ಆದರೆ ಅದು ಕಿವಿಯಿಂದ ಕಿವಿಗೆ ತಲುಪುವ ಹೊತ್ತಿಗೆ ‘ಅವನ ಹೆಂಡತಿ ತುಂಬಾ ಘಾಟಿಯಂತೆ. ಬಜಾರಿಯಂತೆ, ಸಖತ್‌ ಹಟಮಾರಿಯಂತೆ. ಮನೇಲಿ ಆಕೆ ಹೇಳಿದ್ದೇ ನಡೆಯಬೇಕಂತೆ. ಇಲ್ಲಾಂದ್ರೆ ಊಟಾನೇ ಹಾಕಲ್ವಂತೆ.. ’ ಎಂದೆಲ್ಲ ಬದಲಾಗಿರುತ್ತದೆ! ಮತ್ತೆ ಆ ಕ್ಷಣದಿಂದಲೇ ನಿಮ್ಮ ಕುರಿತು ‘ಅಯ್ಯೋ ಪಾಪ’ ಎಂಬ ಭಾವ ಸೃಷ್ಟಿಯಾಗಿರುತ್ತದೆ.

ಒಂದೇ ಮಾತಲ್ಲಿ ಹೇಳಿಬಿಡುವುದಾದರೆ -ನಿಮ್ಮ ಸಂಕಟ ಉಳಿದವರ ಪಾಲಿಗೆ ಒಂದು ಗೇಲಿಯ, ತಮಾಷೆಯ, ಅಯ್ಯೋ ಪಾಪದ ವಿಚಾರವಾಗಿ ಬದಲಾಗಿರುತ್ತದೆ.

ವಿಪರ್ಯಾಸವೆಂದರೆ, ಇದೆಲ್ಲ ಕೆಟ್ಟ ಅನುಭವ ಆದ ಬಳಿಕವೂ, ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಇನ್ನೊಂದು ತಪ್ಪು ಮಾಡಿರುತ್ತೇವೆ. ಏನೆಂದರೆ, ನಾವು ಕೆಲಸ ಮಾಡುವ ಕಚೇರಿಯ/ ಸಂಸ್ಥೆಯ ಮುಖ್ಯಸ್ಥರ ಎದುರು ನಿಂತು ನಮ್ಮ ಸಂಕಟವನ್ನೆಲ್ಲ ಹೇಳಿಕೊಂಡಿರುತ್ತೇವೆ.

ನಮ್ಮ ಕಷ್ಟಗಳನ್ನೆಲ್ಲ ಕೇಳಿದ ನಂತರ -ಆತ ಕರಗಿ ಹೋಗುತ್ತಾನೆ. ಸಮಾಧಾನದ ಮಾತಾಡುತ್ತಾನೆ. ಕಂಬನಿ ಒರೆಸುತ್ತಾನೆ. ಪ್ರೊಮೋಷನ್‌ ಕೊಡುತ್ತಾನೆ, ಸಂಬಳ ಹೆಚ್ಚಿಸುತ್ತಾನೆ. ಇದೇನೂ ಆಗದಿದ್ದರೆ ನಮ್ಮ ಕುರಿತು ಒಂದು ಅನುಕಂಪದ ಭಾವವನ್ನಂತೂ ಖಂಡಿತ ಹೊಂದಿರುತ್ತಾನೆ ಎಂಬ ದೂರಾಲೋಚನೆ ನಮ್ಮದು. ಆದರೆ, ಹಾಗೇನೂ ಆಗುವುದಿಲ್ಲ.

ಎದುರಿಗಿದ್ದಾಗ ಒಂದೂ ಮಾತಾಡದೆ ಎಲ್ಲವನ್ನೂ ಕೇಳಿಸಿಕೊಂಡ ಅಧಿಕಾರಿ, ಒಂದೆರಡು ದಿನಗಳ ನಂತರ ಇನ್ನೊಬ್ಬರೊಂದಿಗೆ ಮತಾಡುತ್ತ ನಮ್ಮ ವಿಷಯ ಬಂದಾಕ್ಷಣ ಎಂಥಾ ವ್ಯಕ್ತೀರೀ ಅವನು? ಸಂಕಟ ಬಂತು ಅಂತ ಹೆಣ್ಣಿಗನ ಥರಾ-ಅಳ್ತಾನಲ್ರೀ, ಅಂದಿರುತ್ತಾನೆ! (ಕಷ್ಟ ಕೇಳಿಕೊಂಡಾಕೆ ಹೆಂಗಸಾಗಿದ್ದರೆ -ಇವರದು ಸದಾ ಇದ್ದದ್ದೇ. ಚಿಕ್ಕದನ್ನೇ ಗುಡ್ಡ ಮಾಡಿರುತ್ತಾರೆ. ಬಿಟ್ಹಾಕಿ ಅತ್ಲಾಗೆ ಎಂದು ತೇಲಿಸಿ ಮಾತಾಡಿರುತ್ತಾನೆ) ಮತ್ತು ಆ ಕ್ಷಣದಿಂದಲೇ ನಮ್ಮ ಕುರಿತು ಒಂದು ಅನಾದರವನ್ನು ಬೆಳೆಸಿಕೊಂಡು ಬಿಡುತ್ತಾನೆ.

ನೆನಪಿಡಿ : ಎಲ್ಲ ನೋವಿಗೂ ಕೊನೆ ಎಂಬುದು ಇದ್ದೇ ಇದೆ. ಹೀಗೆ ಬಂದ ಸಂಕಟ ಹಾಗೆ ಹೋಗಿ ಬಿಡುತ್ತದೆ. ಎಷ್ಟೋ ಬಾರಿ ಅದು ಹೇಳಿ ಕೇಳಿ ಬರುವುದಿಲ್ಲ. ಹೋಗುವಾಗ ಕೂಡ ಅಷ್ಟೇ! ನಮಗಿದು ಅರ್ಥವಾಗಬೇಕು ನಮ್ಮ ಸಂಕಟಗಳಿಗೆ ಯಾವತ್ತೂ ಮಾರ್ಕೆಟ್‌ ಎಂಬುದು ಇರುವುದಿಲ್ಲ. ಹಾಗಾಗಿ ಅದನ್ನು ಪ್ರಚಾರ ಮಾಡಲು ಹೋಗಲೇ ಬಾರದು. ಬೇರೆಯವರ ಅನುಕಂಪದಿಂದ, ಅವರು ಸೂಚಿಸುವ ಪರಿಹಾರದಿಂದ ಬಹಳಷ್ಟು ಸಲ ಸಂಕಟಗಳು ಪರಿಹಾರವಾಗುವುದೇ ಇಲ್ಲ.

ಹಾಗಿರುವಾಗ ಒಬ್ಬರ ಮುಂದೆ ಕಣ್ಣೀರು ಸುರಿಸುತ್ತಾ ಕೂತು ಅವರ ದೃಷ್ಟಿಯಲ್ಲಿ ಕುಬ್ಜರಾಗುವ; ನಗೆಪಾಟಲಿಗೆ ಈಡಾಗುವ ಸರದಿ ನಮ್ಮದಾಗಲೇಬಾರದು.

ಏನಂತೀರಿ?

Courtesy:http://thatskannada.oneindia.in

No comments: