Thursday, April 24, 2008

ಅಣ್ಣಾವ್ರ ಕೊಡುಗೆಗೆ ಮಾಪನ ಉಂಟೆ !

ನನ್ನ ಗೆಳೆಯರಿಬ್ಬರು ಕೇಳಿದರು "ರಾಜ್ ಕುಮಾರ್‍ ಕನ್ನಡಕ್ಕೆ ಏನು ಮಾಡಿದ್ದಾರೆ ಅಂತ ಅಷ್ಟು ಪ್ರಾಮುಖ್ಯತೆ ಕೊಡುತಿದ್ದೀರಿ?" ಎಂದು. ಅದರಲ್ಲಿ ಒಬ್ಬ ಶ..ಶ..ಶ..ಶಹರುಕ್ಕಾನರ ರಸಿಕ. ನನಗೆ ಕೋಪ, ನಗು, ಅಳು, ಬೇಸರ ಎಲ್ಲಾ ಒಟ್ಟಿಗೆ ಬಂದು "ಹಣ ಕೊಟ್ಟು ಸಹಾಯ ಮಾಡುವವರು ಮಾತ್ರ ಮಹನೀಯರು ಎಂಬ ಭ್ರಮೆಯಿಂದ ಬಹಳಷ್ಟು ಜನರು ಹೊರಬರಬೇಕಿದೆ. ಆಗಲೇ ವಿವಿಧ ದೃಷ್ಟಿಕೋನದಿಂದ ವ್ಯಕ್ತಿಗಳನ್ನು ನೋಡಿ ಅರಿಯಲಾದೀತು.

Rajkumar is a Symbol of Unity and a Source of Patriotism to a true Kannadiga. ಯಾವ ಕಾಲದಲ್ಲಿಯೂ ಕನ್ನಡಿಗರನ್ನೆಲ್ಲಾ ಒಗ್ಗೂಡಿಸಬಲ್ಲ ಚೇತನ, ಶಕ್ತಿ ಎಂದರೆ ಅದು ಅಣ್ಣಾವರು, ಅಣ್ಣಾವರ ಅಭಿನಯ, ಅಣ್ಣಾವರ ಗೀತೆಗಳು, ಅಣ್ಣಾವರ ಚಿತ್ರಗಳು. ಇವೆಲ್ಲದರ ಹಿಂದೆ ಸೂಕ್ಷ್ಮವಾಗಿ ನಿಂತಿರುವ ಅಣ್ಣಾವರ ವ್ಯಕ್ತಿತ್ವ.

ಕನ್ನಡದ ಮಹಾಕವಿಗಳು, ಕಾದಂಬರಿಕಾರರು ಕೃತಿಗಳನ್ನು ರಚಿಸಿದರು. ಅವುಗಳ ತತ್ವ, ವೈಚಾರಿಕತೆಗಳನ್ನು ಆ ಕಾಲದಲ್ಲಿ ಕನ್ನಡಿಗರೆಲ್ಲರಿಗೂ ತಲುಪಿಸಿದ್ದು ಸಿನಿಮಾಗಳು . ಅವುಗಳಲ್ಲಿ ಹೆಚ್ಚಿನವು ಅಣ್ಣಾವರ ಸಿನಿಮಾಗಳು.

ಬಬ್ರುವಾಹನ, ವೀರಕೇಸರಿ, ಮಯೂರ, ಕೃಷ್ಣದೇವರಾಯ, ಕವಿರತ್ನ ಕಾಳಿದಾಸ ಮುಂತಾದ ಪಾತ್ರಗಳನ್ನು ನೋಡುವವರ ಮೈನವಿರೇಳಿಸುವಂತಹ ಅಭಿನಯವನ್ನು ಮತ್ತು ಕೇಳುವವರನ್ನು ಬೆರಗುಗೊಳಿಸುವ ಅಚ್ಚಕನ್ನಡ ಹಾಗು ಸಂಸ್ಕೃತ ಸಂಭಾಷಣೆಯನ್ನು ಅಣ್ಣಾವರ ಹೊರತು ಬೇರೊಬ್ಬರು ಬೆಳೆಸಿಕೊಳ್ಳಲಿಲ್ಲ.

ಅಂದಿಗೂ, ಇಂದಿಗೂ, ಮುಂದೆಯೂ ಎಂದೆಂದಿಗೂ ಕನ್ನಡಾಭಿಮಾನವನ್ನು ಹುಟ್ಟಿಸುವ ಕುವೆಂಪುರವರ ’ಎಲ್ಲಾದರು ಇರು, ಎಂತಾದರು ಇರು’ ಕವನವನ್ನು, ರಾಘವೇಂದ್ರ ಸ್ವಾಮಿಯವರನ್ನು ಕುರಿತ ’ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು’ ಭಕ್ತಿಗೀತೆಯನ್ನು, ’ನಾದಮಯ ಈ ಲೋಕವೆಲ್ಲಾ ನಾದಮಯ’ ಗೀತೆಯನ್ನು ಕಣ್ಮುಚ್ಚಿ ಕೇಳ ತೊಡಗಿದಾಗ ನಾವು ಒಳಗಾಗುವ ಭಾವಪರವಶಕ್ಕೆ ಅಣ್ಣಾವರ ಧ್ವನಿ, ಭಕ್ತಿ ಮತ್ತು ಭಾವಗಳ ಪ್ರಭಾವವೇ ಹೆಚ್ಚಾಗಿರುತ್ತದೆ.

Submission to art ಎಂಬಂತೆ ಅಣ್ಣಾವರು ಅಭಿನಯ ಕಲೆ, ಗಾಯನ ಕಲೆ, ಯೋಗ ಕಲೆ ಇತ್ಯಾದಿಗಳಿಗೆ ತಮ್ಮ ಸಕಲ ಸಮಯವನ್ನು ಸಮರ್ಪಿಸಿದರು, ತಮ್ಮನ್ನು ತಾವೇ ಸಮರ್ಪಿಸಿಕೊಂಡರು.

ಸಮಾಜದಲ್ಲಿ ಹೆಸರುಗಳಿಸಿದರೂ, ರಾಜ್ಯ ರಾಷ್ಟ್ರ ಮಟ್ಟದ ಗೌರವ ದೊರೆತರೂ, ರಾಜಕೀಯದಿಂದ, ಬೆಡಗು-ಬಿನ್ನಾಣಗಳಿಂದ, ಕೋಳಿ ಜಗಳಗಳಿಂದ ದೂರವಿದ್ದು ಸರಳ ಜೀವನ ನಡೆಸಿರುವ ಮಹನೀಯರಲ್ಲಿ ಅಣ್ಣಾವರು ಒಬ್ಬರು.

ಇವೆಲ್ಲದಕ್ಕೂ ಮಿಗಿಲಾಗಿ Rajkumar is a Symbol of Unity and a Source of Patriotism to a true Kannadiga. ನಮ್ಮ ಆಟೋ, ಟೆಂಪೋ, ವ್ಯಾನ್, ಬಸ್ ಚಾಲಕರು, BHEL ನೌಕರರು, IT ಉದ್ಯಮಿಗಳು, ಹೀಗೆ ಸಮಾಜದಲ್ಲಿ ವಿವಿಧ ವರ್ಗಗಳು ತಂತಮ್ಮ ಒಗ್ಗಟ್ಟಿನ ಪ್ರತೀಕವಾಗಿ ಹೆಚ್ಚಾಗಿ ಉಳಿಸಿಕೊಂಡಿರುವುದು ಅಣ್ಣಾವರನ್ನು.

ಯಾವ ಕಾಲದಲ್ಲಿಯೂ ಕನ್ನಡಿಗರನ್ನೆಲ್ಲಾ ಒಗ್ಗೂಡಿಸಬಲ್ಲ ಚೇತನ, ಶಕ್ತಿ ಎಂದರೆ ಅದು ಅಣ್ಣಾವರು, ಅಣ್ಣಾವರ ಅಭಿನಯ, ಅಣ್ಣಾವರ ಗೀತೆಗಳು, ಅಣ್ಣಾವರ ಚಿತ್ರಗಳು. ಇವಲ್ಲದರ ಹಿಂದೆ ಸೂಕ್ಷ್ಮವಾಗಿ ನಿಂತಿರುವ ಅಣ್ಣಾವರ ವ್ಯಕ್ತಿತ್ವ.

ಇದಕ್ಕಾಗಿಯೇ ಹೇಳುವುದು "ಅಣ್ಣಾ ನೀ ಮತ್ತೆ ಹುಟ್ಟಿ ಬಾ" ...

No comments: